Jayatu Matsyane Jayatu Koormane

ಜಯತು ಮತ್ಸ್ಯನೆ ಜಯತು ಕೂರ್ಮನೆ
ಜಯತು ಕ್ರೋಡನೆ ಜಯತು ನರಹರಿ 
ಜಯತು ವಾಮನ ಜಯತು ಭಾರ್ಗವ ಜಯತು ರಾಘವನೇ |
ಜಯತು ಕೃಷ್ಣನೆ ಜಯತು  ಬುದ್ಧನೆ
ಜಯತು ಕಲ್ಕಿಯೆ ಜಯತು ದೇವನೆ
ಜಯತು ರುಕ್ಮಿಣಿಪತಿಯೆ ನಿನ್ನಯ ಪದಕ್ಕೆ ಬಾಗುವೆನು || 

ಮತಿಗೆ ಸಲ್ಲದ ಮಹಿಮನಯ್ಯನೆ ಮತಿಗೆ ತೋರುವ ಮಹಿಮೆ ಪೇಳುವೆ
ಸತಿಯ ಜತೆಯಲಿ ಪ್ರೇಮದಿಂದಲಿ ಕಲಹ ಮಾಡಿದನು |
ಮತಿಯ ಪಾಲಿಸಿ ಸಲಹು ಎನ್ನನು
ರತಿಯ ಕಾಂತನ ಜನಕ ವಿಷ್ಣುವೇ
ಸತತ ದುರ್ಜನಹಾರಿ ಲಕುಮೀಕಾಂತ ಎನ್ನೊಡೆಯ ||

ಅಹಿಪಶಾಯಿಯ ಕಮ್ಮಜನಕನ
ಮಹಿಷಿಯಿಪ್ಪರು ವಂದ್ಯ ಪದೆಯರು
ಮಹಿತಮಹಿಮನ ಪ್ರೇಮ ವಿಷಯಯರು ದ್ವ್ಯಧಿಕಷಡ್ಜನರು |
ಮಹಿಯೊಳಿಪ್ಪರೆ ಎಲ್ಲ ಕೇಳಿರಿ
ತುಹಿನ ಕಿರಣನ ವಂಶ ರನ್ನಗೆ ಅಹಿಯ ಮರ್ಧನಗಧಿಕಪ್ರೀಯರು
ಸತ್ಯೆಭೈಷ್ಮಿಯರು ||

ಏಸು ಮಹಿಮಳು ರುಗ್ಗ್ಮಿಯನುಜೆಯು
ದಾಸಿ ಪಿಡಿದ ಸುರನ್ನದಂಡದ 
ಬೀಸೊ ಪತ್ರವ ತಾನೇ ಪಿಡಿಯುತ ಸೇವೆ ಗಯ್ಯುತಿರೆ |
ದಾಸರೊಡೆಯನು ಗೋಪಿನಂದನ
ದಾಸಿಭೈಷ್ಮಿಯ ಮೊಗವ ನೋಡುತ
ಹಾಸ ಮಾಡುತ ಮಾತನಾಡಿದ ಜನವಿಡಂಬಕನು ||

ಆವ ಭೂಪರ ಸಾಮ್ಯ ಸಲ್ಲನು
ಆವ ಸೊಬಗಂಗಳಲಿ ಪೇಳೆಲೆ
ಕಾವೆ ಗೋಗಳ ಕೋಲ ಪಿಡಿಯುತ ನಲಿವೆ ಅಟವಿಯಲಿ |
ಕಾವರಿಲ್ಲವೆ ಭಯದಿ ಕಡಲೋ
ಳಾವರಣ್ಣವ ಕಟ್ಟಿ ಇಪ್ಪೆನು
ಆವ ಗುಣಗಳು ಎನ್ನಲಿಲ್ಲವೆ ಕೇಳೆ ಮಂಗಳೆಯೆ ||

ಅರಸಿ ಬಡವರಿಗಧಿಕ ಪ್ರೀಯನು
ಹರಕು ಭಿಕ್ಷುಕ ತುತಿಪನೆನ್ನನು
ಮರಳುವಾದೆಯೆ ಯಾವ ಬಗೆಯಲಿ ಪೇಳೆ ರುಕ್ಮಿಣಿಯೆ|
ತರುಣಿ ಬುದ್ಧಿಯು ಇಲ್ಲ ನಿನಗೆ
ಮುರನ ವೈರಿಯು ಇಂತು ಪೇಳಿರೆ
ಸರನೆ ಮೂರ್ಚೆಯ ಪೊಂದಿ ದುಃಖವ ತೋರಿದಳು ಜಗಕೆ ||

ಕುಸುಮನಾಭನು ಒದಗಿಯಪ್ಪುತ 
ನಸುತ ನಗುತಲಿ ಮಾತನಾಡಿದ 
ಅಸಿತ ಕೇಶಳೆ ಲೀಲೆಯಿಂದಲಿ ಪೇಳ್ದೆಅರಿಯದೆನೆ| 
ಕುಸುಮದನಳೆ ಕುಪಿತ ಮೋಗದಾ 
ದೆಸೆಯ ನೋಡಲು ಹಾಸ ಮಾಡಿದೆ
ಮೊಸಳೆ ಪಾಲನ ನುಡಿಯ ಕೇಳುತ ಅರಸಿಯಾಡಿದಳು | |

ಸತ್ಯ ಮನಸನೆ ನಿನ್ನ ಬಾಯಲ
ಸತ್ಯ ವೆಂದಿಗು ಸಲ್ಲದಾಲಿಸು
ಮಿಥ್ಯೆ ಮತಿಯರು ಮೋಹ ಪೊ ಕ್ಕುತ ಬೀಳುವರು ತಮಕೆ |
ಸತ್ಯಮಹಿಮನೆ ನಿನ್ನ ವಾಕ್ಯಕೆ
ಸತ್ಯಧರ್ಥವು ಇಪ್ಪುದಂದದಿ
ಮರ್ತ್ಯಗಾರಿಗು ತಿಳಿಯಲಾರದ ಮಹಿಮೆಗೇನೆಂಬೆ. | |

ಯಾವ ಪ್ರಾಕೃತ ಗುಣಗಳಿಲ್ಲವೋ
ಆವ ಭೂಪರು ಆವ ದಿವಿಜರು
ಆವ ದೇವಾನುಗರು ಸಮರೋ ಪೇಳು ಸಮ ವಿಧುರ |
ಕಾವೆ ಜಗವನು ಲಕುಮಿಯರಸನೆ
ಕಾವೆ ವೇದ ಪುರಾಣವೆಲ್ಲವ
ಈವೆ ಮುಕುತಿಯ ಪದವ ಭಕುತರಿಗೆಲ್ಲ ಜಗದೊಡೆಯ.

ಶೌಂಡ ಬಡವರು ನಿನ್ನ ಭಕುತರು
ತೊಂಡರೆಂಬರು ಹೆಂಡಿರೆಲ್ಲರ
ಅಂಡಗರ್ಭನೆ ಕಸಿವೆಯೆಲ್ಲವ ಮತ್ತರಂಜುವನೆ |
ಅಂಡಚಾರಿಗಳಾಗಿ ಮಹಿಮೆಯ
ಹಿಂಡು ಹಿಂಡಲಿ ಪಾಡಿ ಪೋಗಳುತ
ಮುಂಡನೆಯನು- ಗೈದ ಯತಿಗಳೆ ಪಥದಿ ಭಿಕ್ಷುಕರು | |

ವಾತಪಿತ ತನ್ನರಸಿಯಾಡಿದ
ಮಾತ ಲಾಲಿಸಿ ಬಿಗಿದುಅಪ್ಪಿದ
ವಾತ ವಾಣಿಯ ಮೊದಲಲೇಖರು ನೋಡಿ ಸುಖಿಸಿದರು |
ಮಾತೆ ಪೊರಡದು ಮಹಿಮೆ ನೋಡಿರೆ
ಗಾಥೆಯಾಲಿಸಿ ಪ್ರೀತಿ ತೋರಿಸು 
ಗೀತೆ ಬೋಧಕ ಮಧ್ವ ನಾಥನೆ ವಿಜಯ ಸಾರಥಿಯೆ ||

Comments

Popular posts from this blog

Kusina kandira namma Guruvyasara kandira

Poreyenna poreyenna pundarikaksha

Mahadevara Mahime